ಹೌದು, ಈ ಶೀರ್ಷಿಕೆ ಉದ್ದೇಶಪೂರ್ವಕ. ನಾನಿಲ್ಲಿ ಕನ್ನಡ (ಮೂಲತಃ ಸಂಸ್ಕೃತ)ದ ವಾಕ್ ಸ್ವಾತಂತ್ರ್ಯದ ಬಗ್ಗೆ ಹೇಳಲು ಹೊರಟಿದ್ದಲ್ಲ. ನನಗೆ ದೊರಕಿದ walk ಸ್ವಾತಂತ್ರ್ಯದ ಬಗ್ಗೆ!! ಅಂದರೆ walking ಅಥವಾ ನಡೆಯಲು ಸಿಕ್ಕ ಸ್ವಾತಂತ್ರ್ಯವಲ್ಲ.. ನಡೆಯುವುದರಿಂದ ಸ್ವಾತಂತ್ರ್ಯ ಅಥವಾ ಮುಕ್ತಿ ಸಿಕ್ಕಿದ ಬಗ್ಗೆ ಹೇಳಲು ಹೊರಟಿದ್ದು. ಮತ್ತು ಈ ಕಥನ ನನಗೆ 3-4 ವರ್ಷ ವಯಸ್ಸು ಇದ್ದಾಗಿನಿಂದ ಇಲ್ಲಿಯವರೆಗಿನ ಕಥೆ-ವ್ಯಥೆ
ನನಗೆ ನೆನಪಿನ ಶಕ್ತಿ ಅಗತ್ಯಕ್ಕಿಂತ ಸ್ವಲ್ಪ ಜಾಸ್ತಿ. ಕೇವಲ 3-4 ವರ್ಷದಲ್ಲಿದ್ದಾಗ ನಡೆದ ಕೆಲವು ಘಟನೆಗಳು ಪೂರ್ತಿ as-it is ಅಲ್ಲದಿದ್ದರೂ ಅಸ್ಪಷ್ಟವಾಗಿ ನೆನಪಿವೆ. ಚಿಕ್ಕ ಮಕ್ಕಳು ನಡೆಯುವಾಗ ಹಾಕುವ ಕೆಂಪು, ಗುಲಾಬಿ, ಹಳದಿ, ನೀಲಿ ಈ ರೀತಿ ಬಣ್ಣಬಣ್ಣದ, ಹೆಜ್ಜೆ ಇಟ್ಟಂತೆಲ್ಲ ‘ಪಾಂವ್ ಪಾಂವ್’ ಎಂಬ ಶಬ್ದ ಹೊರಡಿಸುವ ಶೂ ಬೇಕೆಂದು ನಾನು ಆಸೆಪಟ್ಟು ಹಠ ಹಿಡಿದದ್ದು ನೆನಪಿದೆ. ಓರಗೆಯ ಇತರ ಮಕ್ಕಳು ಡೌಲಿನಿಂದ ಬೇಕೆಂದೇ ಒತ್ತಿ ಒತ್ತಿ ಹೆಜ್ಜೆ ಹಾಕುತ್ತ ‘ಪಾಂವ್’ ಶಬ್ದ ಮಾಡುತ್ತ ಓಡಾಡುವಾಗ ನಂಗೂ ಒಂದು ಬೇಕು ಅಂತ ಎಷ್ಟೇ ಗಲಾಟೆ ಮಾಡಿದರೂ ಸಿಕ್ಕಿದ್ದು ನಾಲ್ಕು ಏಟು ಮಾತ್ರ.
ನಂತರದ ಆಸೆ ಮೂರು-ಗಾಲಿ ಸೈಕಲ್ ಬೇಕು ಎಂಬುದು. ನಾಲ್ಕರಿಂದ ಆರೇಳು ವಯಸ್ಸಿನ ತನಕ ನನ್ನ ಜೊತೆಯ ಮಕ್ಕಳು ತಮ್ಮ ತಮ್ಮ ಮೂರು-ಗಾಲಿ ಸೈಕಲ್ ಓಡಿಸುವಾಗ ಬಾಯಿಬಿಟ್ಟುಕೊಂಡು ನೋಡುವುದೇ ಆಯಿತು. ನನ್ನಷ್ಟೇ ವಯಸ್ಸಿನ ನನ್ನ ಕಸಿನ್ ಒಬ್ಬನ ಬಳಿ ಕೂಡ ಮೂರು-ಗಾಲಿ ಸೈಕಲ್ ಇತ್ತು. ಆದರೆ ಕೇವಲ ಒಂದೆರಡು ಬಾರಿ ಅವನ ಬಳಿ ಗೋಗರೆದು ಓಡಿಸಿದ್ದಷ್ಟೇ. ಬೇರೆಯವರ ವಸ್ತುಗಳನ್ನು ಮುಟ್ಟಬಾರದು, ಬೇಡಬಾರದು ಎಂಬ ಅಮ್ಮನ ಬೋಧನೆಗೆ, ಮತ್ತು ಅದಕ್ಕಿಂತ ಹೆಚ್ಚಾಗಿ ಅವಳ ಬಿರುಗಣ್ಣಿಗೆ ಹೆದರಿ ಸುಮ್ಮನೇ ಇದ್ದದ್ದಾಯಿತು. ಮೂರು-ಗಾಲಿ ಸೈಕಲ್ ಆಸೆ ಅಲ್ಲಿಗೆ ಮುಗಿಯಿತು.
ಎಂಟರಿಂದ ಹದಿನಾಲ್ಕು – ಹದಿನೈದರ ವಯಸ್ಸಿನವರೆಗೂ ಮಾಮೂಲಿ ಸೈಕಲ್ ಓಡಿಸುವ ಆಸೆ ಜಾರಿಯಲ್ಲಿತ್ತು. ಆ ವಯಸ್ಸಿಗೆಲ್ಲ ಸೈಕಲ್ ಕೊಂಡುಕೊಳ್ಳುವುದು ನಮ್ಮ ಆರ್ಥಿಕ ಸ್ಥಿತಿಗೆ ಮೀರಿದ ಸಂಗತಿ ಎಂಬುದು ಅರಿವಾಗಿತ್ತು. ಹಾಗಾಗಿ ಗೆಳೆಯ-ಗೆಳತಿಯರ ಜೊತೆ ಒಂದು ರೂಪಾಯಿಗೆ ಒಂದು ತಾಸಿನ ಬಾಡಿಗೆಗೆ ಸೈಕಲ್ ತಂದು ಗ್ರೌಂಡ್ ನಲ್ಲಿ ಕಲಿಯುವ ಪ್ರಯತ್ನ ಶುರುವಾಯಿತು. ಆದರೆ ಅದೃಷ್ಟ ಇಲ್ಲಿಯೂ ಕೈ ಕೊಟ್ಟಿತು. ಬಾಡಿಗೆ ಸೈಕಲ್ ಶಾಪ್ ನಲ್ಲಿ ಚಿಕ್ಕ ಸೈಜಿನ ಸೈಕಲ್ ಗಳು ಇರಲಿಲ್ಲ. ಮತ್ತು ನಾನಾಗ ತುಂಬಾ ಕುಳ್ಳಗಿದ್ದೆ. ಹಾಗಾಗಿ ಮಧ್ಯದ ರಾಡ್ ನ ಒಳಗಡೆಯಿಂದ ಕಾಲು ತೂರಿಸಿ “ಒಳ ಪೆಟ್ಲು” (ಅಥವಾ ಕತ್ತರಿ) method ಟ್ರೈ ಮಾಡುತ್ತಿದ್ದೆ. ಒಂದೆರಡು ಬಾರಿ friends ಎಲ್ಲ ಸೇರಿ ನನ್ನನ್ನು ಹೇಗೋ ಸೀಟ್ ಮೇಲೆ ಕೂರಿಸಿ ಸೈಕಲ್ ಹಿಡಿದುಕೊಂಡು ಕಲಿಸಲು ಪ್ರಯತ್ನಿಸಿದರು. ಕುಳ್ಳಗಿದ್ದ ಕಾರಣ ಸೈಕಲ್ ಪೆಡಲ್ ಕಾಲಿಗೆ ಎಟುಕುತ್ತಿರಲಿಲ್ಲ. ಎಡಗಡೆಯ ಪೆಡಲ್ ಮೇಲೆ ಬಂದಾಗ ಅದನ್ನು ಜೋರಾಗಿ ಒದೆಯುವುದು, ಬಲದ್ದು ಮೇಲೆ ಬಂದಾಗ ಶಕ್ತಿಮೀರಿ ಅದನ್ನು ತಳ್ಳುವುದು.. ಹೀಗಾಗಿ ಸೈಕಲ್ ಅತಿಯಾದ speed gain ಮಾಡಿಕೊಳ್ಳುತ್ತಿತ್ತು. ಸಹಜವಾಗಿಯೇ ಸೈಕಲ್ ವೇಗಕ್ಕೆ ಓಡಲು ಆಗದೇ ಫ್ರೆಂಡ್ಸ್ ಹಿಂದೆ ಉಳಿಯುವುದು.. ನಾನು ಬ್ಯಾಲೆನ್ಸ್ ತಪ್ಪಿ ಸೈಕಲ್ ಸಮೇತ ಬೀಳುವುದು ಪ್ರತಿನಿತ್ಯದ ಕಥೆಯಾಯಿತು. ಎರಡೇ ದಿನದಲ್ಲಿ ಬಾಡಿಗೆಯ ಲಡಕಾಸಿ ಸೈಕಲ್ ಹ್ಯಾಂಡಲ್ ಸೊಟ್ಟಗಾಯಿತು. ಬಾಡಿಗೆಯ ಕಾಸು ಒಂದು ರೂಪಾಯಿಯನ್ನೇ ಮನೆಯಲ್ಲಿ ಗೋಗರೆದು ಕಷ್ಟಪಟ್ಟು ಗಿಟ್ಟಿಸಿಕೊಳ್ಳುತ್ತಿದ್ದ ನನಗೆ ಸೈಕಲ್ ರಿಪೇರಿಗೆ ಕಾಸು ಕೊಡುವ ಸಾಧ್ಯತೆ ಖಂಡಿತಾ ಇಲ್ಲ ಎಂಬುದು ಬಹುಬೇಗ ಅರ್ಥವಾಯಿತು. ಹಾಗಾಗಿ ಸೈಕಲ್ ಕಲಿಯುವ ಪ್ರಯತ್ನಕ್ಕೆ ಎಳ್ಳು-ನೀರು ಬಿಟ್ಟಾಯಿತು.
ಮುಂದಿನ ಆರೆಂಟು ವರ್ಷಗಳು ಕಾಲೇಜು, ಯೂನಿವರ್ಸಿಟಿ ಎಂದೇ ಕಳೆಯಿತು. ಆದರೆ ಈ ಮಧ್ಯೆ ನನ್ನ ನಡೆಯುವ ವೇಗ ಅಸಾಧಾರಣವಾಗಿ ಬೆಳೆದಿತ್ತು. ನನ್ನ ಪ್ರಾಥಮಿಕ ಶಾಲೆ (5th – 7th) ಹಾಗೂ ಹೈಸ್ಕೂಲ್ ಮನೆಯಿಂದ ಮೂರು ಮೈಲಿ ದೂರ ಇದ್ದವು. ಹಾಗಾಗಿ ಸುಮಾರು 6 ವರ್ಷಗಳ ಕಾಲ ನಾನು ಪ್ರತೀದಿನ ಹನ್ನೆರಡು ಮೈಲಿ ನಡೆಯುತ್ತಿದ್ದೆ. ಆಗೆಲ್ಲ ಪ್ರಾಥಮಿಕ ಶಾಲೆಯ ಸಮಯ ಈಗಿನಂತಿರಲಿಲ್ಲ. ಬೆಳಿಗ್ಗೆ 8 ರಿಂದ 11.30, ಪುನಃ ಮಧ್ಯಾಹ್ನ 2 ರಿಂದ 5. ಹಾಗಾಗಿ ಊಟಕ್ಕೆ ಮನೆಗೆ ಬಂದು ಪುನಃ ಹೋಗುವುದು ಸಹಜವಾಗಿತ್ತು. ಆದರೆ ಹೈಸ್ಕೂಲ್ ನ ಸಮಯ ಬೆಳಿಗ್ಗೆ 10 ರಿಂದ 1, ಮತ್ತು 2 ರಿಂದ 5. ಊಟಕ್ಕೆ ಬಾಕ್ಸ್ ಕಟ್ಟಿಕೊಡುವುದು ಆಗ ಕಾಮನ್ ಇರಲಿಲ್ಲ. ಯಾಕೆ ಎಂದು ನನಗೆ ಈಗಲೂ ಗೊತ್ತಿಲ್ಲ. ಹಾಗಾಗಿ ಕೇವಲ ಒಂದು ತಾಸಿನ ಸಮಯದಲ್ಲಿ ಮೂರು ಮೈಲಿ ನಡೆದು ಮನೆಗೆ ಬಂದು ಊಟ ಮಾಡಿ ಪುನಃ ಮೂರು ಮೈಲಿ ನಡೆದು ಶಾಲೆಗೆ ಹೋಗುವುದು. ಹೈಸ್ಕೂಲ್ ನ ಮೂರೂ ವರ್ಷ ಹೀಗೆಯೇ ಕಳೆಯಿತು. ಕಾಲೇಜಿನ 5 ವರ್ಷ ನಡೆಯೋದು ಕಡಿಮೆ ಆಗಬೇಕಿತ್ತು. ಯಾಕಂದ್ರೆ ನಮ್ಮ ಮನೆಗೆ ಕಾಲೇಜ್ ಹತ್ತಿರವೇ ಇತ್ತು. ಆದರೆ ನಾನು ಟೈಪಿಂಗ್ ಕ್ಲಾಸ್ ಗೆ ಸೇರಿಕೊಂಡೆ. ಮತ್ತು ಅದು ನಮ್ಮ ಮನೆಯಿಂದ ನಾಲ್ಕು ಮೈಲಿ ದೂರದಲ್ಲಿತ್ತು 😀 ಟೈಪಿಂಗ್ ನಲ್ಲಿ (ಇಂಗ್ಲಿಷ್ ಹಾಗೂ ಕನ್ನಡ) ಜೂನಿಯರ್, ಸೀನಿಯರ್ exams ಮುಗಿಸುವ ಹೊತ್ತಿಗೆ ನಾನು ದಿನಕ್ಕೆ 8 ಮೈಲಿಯಂತೆ ನಾಲ್ಕು ವರ್ಷ ನಡೆದಿದ್ದೆ. MCA ಮಾಡಲು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಮೇಲೂ ನಡೆಯುವಿಕೆ ಏನೂ ಕಡಿಮೆಯಾಗಲಿಲ್ಲ. ಯೂನಿವರ್ಸಿಟಿ ಕ್ಯಾಂಪಸ್ ಒಳಗೆಯೇ ಲೇಡೀಸ್ ಹಾಸ್ಟೆಲ್ ನಿಂದ MCA ಡಿಪಾರ್ಟ್ಮೆಂಟ್ ಸುಮಾರು ನಾಲ್ಕೂವರೆ ಮೈಲಿ ದೂರವಿತ್ತು. ಮತ್ತೆ ನಟರಾಜ ಸರ್ವಿಸ್ !!
ಓದು ಮುಗಿಸಿ ಕೆಲಸಕ್ಕೆ ಬೆಂಗಳೂರು ಪಾಲಾದ ಮೇಲೆ ಮೊದಲಿನಷ್ಟು ನಡೆಯುವ ಪ್ರಸಂಗ ಬರಲಿಲ್ಲ. (ಆದರೆ ಅಷ್ಟು ವರ್ಷಗಳ ಕಾಲ ಕಡಿಮೆ ಸಮಯದಲ್ಲಿ ಹೆಚ್ಚು distance ಕವರ್ ಮಾಡಲು ವೃದ್ಧಿಸಿಕೊಂಡ ವೇಗದ ಗತ ವೈಭವ ನನ್ನ ನಡಿಗೆಯಲ್ಲಿ ಇನ್ನೂ ಇದೆ !! ) ಈ ಮಧ್ಯೆ two-wheeler ಕಲಿಯುವ ಹುಕಿ ಬಂತು. ಸಹೋದ್ಯೋಗಿಗಳು, ಗೆಳತಿಯರು, ಕೊನೆಗೆ ವಿದ್ಯಾರ್ಥಿಗಳು ಹೀಗೆ ಎಲ್ಲರಿಂದ, ಎಲ್ಲೆಲ್ಲಿ ಸಾಧ್ಯವೋ ಆ ಎಲ್ಲ ಸಂದರ್ಭಗಳಲ್ಲಿ ನನ್ನ ಪ್ರಯತ್ನ ಜಾರಿಯಲ್ಲಿಟ್ಟೆ. ಆದರೆ ಒಂದಲ್ಲ ಒಂದು ಕಾರಣಕ್ಕೆ ನನ್ನ ಪ್ರಯತ್ನಗಳಿಗೆ ಯಶ ದೊರೆಯಲಿಲ್ಲ. ಬೇರೆಯವರ ಗಾಡಿಯನ್ನು ಎಷ್ಟು ಸಲ ಅಂತ ಬೀಳಿಸುವುದು? 😉 ಕೊನೆಗೆ ನಾನೇ two-wheeler ಖರೀದಿಸುವ ಯೋಚನೆ ಬಂತು. ಯೋಚನೆ ಜಾರಿಯಾಗುವ ಮೊದಲೇ ಎಂದಾದರೂ ನಾನು ಗಾಡಿ ಓಡಿಸಬಲ್ಲೆ ಎಂಬ ನಂಬಿಕೆಯೇ ಹೊರಟುಹೋಗಿತ್ತು. ಹಾಗಾಗಿ ಕಾರ್ ಖರೀದಿಸುವ ಯೋಚನೆ ಬಂತು. ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆ ಹೇಗೆಂದರೆ ಬಾಡಿಗೆ ಮನೆ ಬದಲಾಯಿಸುವಾಗ ಪಾರ್ಕಿಂಗ್ ಗೆ ಜಾಗ ಇರುವ ಮನೆಯೇ ಎಂದು ಯೋಚಿಸಬೇಕು. ಆದ್ದರಿಂದ ಮೊದಲು ಮನೆ ಖರೀದಿಸಿ ಪಾರ್ಕಿಂಗ್ confirm ಮಾಡ್ಕೊಂಡು ಕಾರ್ ತಗೊಳೋಣ ಅಂದ್ಕೊಂಡೆ. ಅಂತೂ ಪಾರ್ಕಿಂಗ್ ಸ್ಪೇಸ್ ಇರೋ ಫ್ಲಾಟ್ ತಗೊಂಡೆ. ಮನೆ ತಗೊಂಡು ಕೈ ಖಾಲಿಯಾಗಿತ್ತು. ಆರ್ಥಿಕವಾಗಿ ಸ್ವಲ್ಪ ಸುಧಾರಿಸಿಕೊಂಡು ಇನ್ನೇನು ಕಾರ್ ತಗೋಬೇಕು ಅಂತ ಯಾವುದು-ಏನು ಅಂತ ಲೆಕ್ಕಾಚಾರ ಹಾಕುವಷ್ಟರಲ್ಲಿ ನನ್ನ ಮೈಂಡ್-ಸೆಟ್ ಗೆ ಸೂಟ್ ಆಗೋ ಹುಡುಗ ಸಿಕ್ಕಿದ ಅಂತ ಮದುವೆ ಆಗಿಬಿಟ್ಟೆ 😀 ಗಂಡನ ಬಳಿ ಹೇಗೂ ಕಾರ್ ಇದೆಯಲ್ಲ ಅಂತ ಕಾರ್ ಯೋಚನೆ ಬಿಟ್ಟೆ. ಪ್ರತೀದಿನ ಬೆಳಿಗ್ಗೆ ಕಾಲೇಜ್ ಗೆ ಗಂಡನಿಂದ ಡ್ರಾಪ್, ಸಂಜೆ ನಡೆದುಕೊಂಡು ಮನೆಗೆ ಬರುವುದು. ಕೇವಲ ಮೂರು ಕಿ.ಮೀ. ದೂರದ ಕಾಲೇಜ್ ನಿಂದ ನಡೆದು ಬರುವುದು ವಿಶೇಷವೆನಿಸಲಿಲ್ಲ. ಆದರೆ ಕಾಲೇಜ್ ನಲ್ಲಿ ಸೀರೆ ಉಡುವುದು ಕಂಪಲ್ಸರಿ ಮಾಡಿದ ಮೇಲೆ ನಡೆಯುವುದು ಕಷ್ಟವೆನಿಸಿತು. ಹಾಗಾಗಿ ಸಂಜೆ ಸಹೋದ್ಯೋಗಿಯ ಜತೆ ಡ್ರಾಪ್ ಕೇಳಲು ಶುರುಮಾಡಿದೆ. ಆದರೆ “ನಡೆಯಲು ದೂರ-ಆಟೋ/ಬಸ್ ಗೆ ಹತ್ತಿರ” ಎಂಬಂತೆ ನನ್ನ ಅನೇಕ ಕೆಲಸಗಳಿಗೆ ‘ಓಡಾಡಲು ವಾಹನವಿಲ್ಲ’ ಎಂಬುದೇ ಅಡಚಣೆಯಾಗುತ್ತಿತ್ತು. ಊರಲ್ಲಿ 10-12 ಮೈಲಿ ನಡೆದ ನನಗೆ ಬೆಂಗಳೂರಿನ ಗಿಜಿಗುಡುವ ಟ್ರಾಫಿಕ್, footpath ಮೇಲೂ two-wheeler ಓಡಿಸುವವರ ಹಾವಳಿ, ಧೂಳು – ಹೊಗೆ ಇವೆಲ್ಲದರ ಮಧ್ಯೆ ನಡೆಯುವುದು ಹಿಂಸೆ ಅನಿಸುತ್ತದೆ. ಹಾಗಾಗಿ ಮತ್ತೊಮ್ಮೆ two-wheeler ಕಲಿಯುವ ಪ್ರಯತ್ನ ಶುರು ಮಾಡಿದೆ – ಗಂಡನ ವಿರೋಧದ ಹೊರತಾಗಿಯೂ. ಈ ಬಾರಿ ನನಗೆ ಕಲಿಯಲು ಗಾಡಿ ಕೊಟ್ಟಿದ್ದು ನನ್ನ ಪಕ್ಕದ ಮನೆಯವರು, ಮತ್ತು ಕಲಿಸಲು ಒಪ್ಪಿಕೊಂಡಿದ್ದು ನನ್ನ ಮಾಜಿ ಸಹೋದ್ಯೋಗಿ ಹಾಗೂ ಹಾಲಿ PhD ಸ್ಟೂಡೆಂಟ್ 😉 ಎರಡು-ಮೂರು ದಿನಗಳಲ್ಲೇ confidence ಬಂತು. ಆದರೆ ನಾಲ್ಕು ದಿನ ಕಳೆಯುವಷ್ಟರಲ್ಲಿ ನಿಂತಿರುವ ಬೈಕ್ ಒಂದಕ್ಕೆ ಗುದ್ದಿದೆ ಅದರ ಓನರ್ ಹಿಂದೆ ತನ್ನ ಗಾಡಿಗೆ ಆದ ಎಲ್ಲ ನುಜ್ಜು-ಗುಜ್ಜುಗಳನ್ನೂ ನನ್ನ ತಲೆಗೇ ಕಟ್ಟಿದ. ಕೈಲಿ ಪರ್ಸ್ ಇರಲಿಲ್ಲ. ಹಾಗಾಗಿ ಅವನ ಫೋನ್ ನಂಬರ್, ಅಡ್ರೆಸ್ ಪಡೆದು ಬಂದು ಮಾರನೇ ದಿನ “ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು” ಎಂದ ಪುಣ್ಯಕೋಟಿಯಂತೆ ಅವನ ಮನೆಗೇ ಹೋಗಿ ದುಡ್ಡು ಕೊಟ್ಟು ಬಂದು two-wheeler ಗೆ ಕೊನೆಯ ನಮಸ್ಕಾರ ಹೊಡೆದೆ.
ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೆ ಕೊನೆಗೂ ಕಾರ್ ಖರೀದಿಸಲು ಮನಸ್ಸು ಮಾಡಿದೆ. ಬೆಂಗಳೂರಿನ ಟ್ರಾಫಿಕ್ ಗೆ two-wheeler ಬೇಡ ಎಂದು ವಿರೋಧಿಸುತ್ತಿದ್ದ ನನ್ನ ಗಂಡ ಗೇರ್ ಇರುವ ಕಾರ್ ಬೇಡ, ಆಟೋಮ್ಯಾಟಿಕ್ ಇರಲಿ ಎಂದಾಗ ಮತ್ತೆ ನನ್ನ ಗಲಾಟೆ ಶುರುವಾಯ್ತು. ಆದರೆ ಈ ವಿಷಯದಲ್ಲಿ ನನ್ನ ಮಾತು ಕೇಳದ ಗಂಡ ಆಟೋಮ್ಯಾಟಿಕ್ ಕಾರ್ ಸೆಲೆಕ್ಟ್ ಮಾಡಿದ್ರು. ಕಾರ್ ಕೊಂಡ ಮರುದಿನದಿಂದಲೇ ಪಕ್ಕದಲ್ಲಿ ಗಂಡನನ್ನು ಕೂರಿಸಿಕೊಂಡು ನನ್ನ ಪ್ರಯಾಣ ಶುರುವಾಯಿತು. ಒಂದು ವಾರದಲ್ಲಿ ಒಬ್ಬಳೇ ಓಡಿಸುವಷ್ಟು ಧೈರ್ಯ ಬಂತು. ಡ್ರೈವಿಂಗ್ ಲೈಸನ್ಸ್ ಮಾಡಿಸಿ ಎರಡು ವರ್ಷವಾದರೂ ಗೇರ್ ಕಾರ್ ಓಡಿಸಲು ಬರದಿದ್ದ ನಾನು ಆಟೋಮ್ಯಾಟಿಕ್ ಕಾರ್ ಸೆಲೆಕ್ಟ್ ಮಾಡಿದ ಗಂಡನ ನಿರ್ಧಾರವನ್ನು ಮೊದಲ ಬಾರಿಗೆ ಮೆಚ್ಚಿದೆ. ಅಂತೂ ನನ್ನ ನಟರಾಜ ಸರ್ವಿಸ್ ಗೆ ಕೊನೆಯ ಮೊಳೆ ಬಿತ್ತು. ನಡೆಯುವಿಕೆಯಿಂದ ಸ್ವಾತಂತ್ರ್ಯ/ಮುಕ್ತಿ ಸಿಕ್ಕಿತು.
ಇಷ್ಟು ವರ್ಷಗಳ ಕಾಲ ನಡೆದ ನನಗೆ ಈಗ ಕಾರ್ ನಲ್ಲಿ ಓಡಾಡುವುದು ಖುಷಿ ಕೊಡುತ್ತಿದೆಯೇ ಎಂದು ಕೇಳಿದರೆ ನನ್ನ ವಿಷಾದದ ಉತ್ತರ ‘ಇಲ್ಲ’ ಎಂದೇ. ಕಾರಣಗಳು ಹಲವಾರು. ಮೊದಲಿನಿಂದಲೂ ಅಷ್ಟೆಲ್ಲ ನಡೆಯುತ್ತಿದ್ದ ನನಗೆ ಜೊತೆಯಾಗಿ ಯಾರಾದರೂ ಇರುತ್ತಿದ್ದರು. ಶಾಲಾ ಕಾಲೇಜ್ ಗಳಲ್ಲಿ ಸಹಪಾಟಿಗಳು ಜೊತೆಯಿರುತ್ತಿದ್ದರು. ಬೆಂಗಳೂರಿನಲ್ಲಿ ಬಸ್ ಪ್ರಯಾಣದಲ್ಲಿ ಪರಿಚಯ ಇಲ್ಲದಿದ್ದರೂ ಸಹಪ್ರಯಾಣಿಕರು ಇದ್ದೇ ಇರುತ್ತಾರೆ. ಪ್ರತೀ ದಿನ ಒಂದೇ ರಸ್ತೆಯಲ್ಲಿ ನಡೆಯುತ್ತಿದ್ದರೆ ಅಪರಿಚಿತರ ಮುಖಗಳೂ ಪರಿಚಿತವಾಗುತ್ತವೆ. ಸುತ್ತಮುತ್ತಲಿನ ಪರಿಸರ ಆಪ್ತವಾಗುತ್ತದೆ. ದಾರಿಯಲ್ಲಿ ನಡೆಯುವ ಘಟನೆಗಳಿಗೆ ಸ್ಪಂದಿಸುವ ಸಾಧ್ಯತೆ ಇರುತ್ತದೆ. ಇವೆಲ್ಲವೂ ನನಗೆ ಸಂಬಂಧಿಸಿದ್ದು ಎಂದೋ ಅಥವಾ ನಾನು ಎಲ್ಲರೊಳಗೊಂದಾಗಿರುವೆ ಎಂಬಂಥಹುದೋ ಭಾವನೆ ಇರುತ್ತದೆ. ಆದರೆ ಕಾರ್ ನಲ್ಲಿ ನಾನೊಬ್ಬಳೇ ಒಂಟಿ ಗೂಬೆ. ಕಾರಿನ ಒಳಗೆ ಕುಳಿತು ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ಬಂಧಿಯಾಗುತ್ತಿರುವ ಭಾವ. ಇಡೀ ಪ್ರಪಂಚವೇ ನನ್ನಿಂದ ದೂರವಿದೆ ಎನಿಸಲಾರಂಭಿಸುತ್ತದೆ. ದಾರಿಯಲ್ಲಿ ಸಿಗುವ ಪ್ರತೀ ಬೈಕ್/ಆಟೋ/ಕಾರ್/ಬಸ್ ಡ್ರೈವರ್ ಗಳೂ ನನ್ನನ್ನು ವೈರಿಯಂತೆ ನೋಡಿ ಗುರಾಯಿಸಿ ಪ್ರತಿಸ್ಪರ್ಧಿಯಂತೆ overtake ಮಾಡಿ ಮುಂದೆ ಹೋಗಿ ಪ್ರಪಂಚವನ್ನೇ ಗೆದ್ದ ನೋಟ ಬೀರುವಾಗ ಹಿಂಸೆಯಾಗುತ್ತದೆ. ಒಂದು ಕ್ಷಣವೂ ತಾಳ್ಮೆಯಿಲ್ಲದಂತೆ ಹಿಂದಿನಿಂದ ಅನಗತ್ಯವಾಗಿ ಹಾರ್ನ್ ಮಾಡಿ ತಾವೂ frustrate ಆಗಿ ನನ್ನನ್ನೂ ಗಲಿಬಿಲಿಗೊಳಿಸುವವರ ಬಗ್ಗೆ ಏಕಕಾಲಕ್ಕೆ ಅನುಕಂಪವೂ, ಸಿಟ್ಟೂ ಬರುತ್ತದೆ. ಕೇವಲ ಒಂದು ಕಾರನ್ನು ಹಿಂದೆ ಹಾಕಿ ಇವರು ಜೀವನದಲ್ಲಿ ಏನು ಸಾಧಿಸುತ್ತಾರೆ, 15-20 ಸೆಕೆಂಡ್ ಗಳನ್ನು ಉಳಿಸಿ ಏನು ಮಾಡುತ್ತಾರೆ ಅನಿಸುತ್ತದೆ. ಕಂಡಕಂಡಲ್ಲಿ ತೂರಿಕೊಂಡು ಬರುವ ಬೈಕ್/ಆಟೋಗಳ ಹಾವಳಿಯಿಂದಾಗಿ ಕಾರ್ ನಲ್ಲಿ ರೇಡಿಯೋ ಹಾಕಿಕೊಳ್ಳಲೂ ಭಯ ನನಗೆ. ಹಾಡುಗಳ ಮಧ್ಯ ಮೈಮರೆತು ಎಲ್ಲಿ ಯಾವ ಹಾರ್ನ್ ಕೇಳದೇ ಹೋದರೆ ಎಂದು. ಕೇವಲ ಒಬ್ಬಳಿಗೊಸ್ಕರ ಕಾರ್ ಓಡಿಸಿ ಟ್ರಾಫಿಕ್ ಗೆ contribute ಮಾಡುತ್ತಿದ್ದೇನೆ, ಪರಿಸರಕ್ಕೆ ಧಕ್ಕೆ ತರುತ್ತಿದ್ದೇನೆ ಎಂಬ ಕೀಳರಿಮೆ ದಿನವೂ ಕಾಡುತ್ತದೆ. ನಾನು ಡ್ರೈವ್ ಮಾಡಲು ಶುರು ಮಾಡಿದಾಗಿನಿಂದ ದಾರಿಯಲ್ಲಿ ಕಾಣುವ ಮುದ್ದಾದ ನಾಯಿ/ಬೆಕ್ಕಿನ ಮರಿಗಳನ್ನು, ಆಕಳುಕರುಗಳನ್ನು ನೋಡಿ ಖುಷಿಪಡುವ ಭಾಗ್ಯ ಕಳೆದುಕೊಂಡೆ. ಯಾರದೋ ಮನೆಯ ಅಂಗಳದಲ್ಲಿ ಅರಳಿದ ಹೂವುಗಳು, ಬೀದಿಬದಿಯ ಮರಗಳಲ್ಲಿನ ಹಸಿರು, ಹಣ್ಣು-ಹೂವುಗಳ ರಾಶಿ, ವ್ಯಾಪಾರಿ-ಗ್ರಾಹಕರ ನಡುವಿನ ಸಂಭಾಷಣೆ, ಅವರ ಮುಖಭಾವಗಳು, ದಾರಿಬದಿಯ ಅಂಗಡಿಗಳಲ್ಲಿ ತೂಗಾಡಿಸಿರುವ ಡ್ರೆಸ್/ಸೀರೆಗಳು, ಚಿತ್ರ-ವಿಚಿತ್ರ ಬೋರ್ಡ್ ಗಳು ಯಾವುದೂ ಈಗ ನನ್ನ ನಿಲುಕಿನಲ್ಲಿಲ್ಲ. ಬೆಂಗಳೂರಿನ ಅನಿರೀಕ್ಷಿತ ಮಳೆಯ ಸೊಬಗು, ನಿಮಿಷಗಳಲ್ಲೇ ಇಣುಕುವ ಸೂರ್ಯ ಮೂಡಿಸುವ ಕಾಮನಬಿಲ್ಲಿನ ಚಿತ್ತಾರ, ಕಲ್ಪನೆಗೆ ಸವಾಲಾಗುವ ವಿವಿಧ ಆಕಾರಗಳ ಮೋಡಗಳು… ಇವೆಲ್ಲ ಕಾರಿನೊಳಗೆ ಬಂಧಿಯಾದ ನನ್ನಿಂದ ದೂರ ದೂರ. ಡ್ರೈವಿಂಗ್ ಮುಗಿಯುವವರೆಗೂ ಅಗೋಚರವಾದ ಟೆನ್ಶನ್. ಮೈಮರೆಯುವಂತೆಯೇ ಇಲ್ಲ. ಯಾವ ಭಾವನೆಗಳ ನಡುವೆಯೂ ಕಳೆದುಹೊಗುವಂತಿಲ್ಲ. ಸದಾ ಎಚ್ಚರದ ಸ್ಥಿತಿ. ಬೆಂಗಳೂರಿನಂಥ ನಗರದಲ್ಲೂ ಬಸ್ ನಲ್ಲಿ ಓಡಾಡುವಾಗ ನಾನು ಯಾವುದೋ ಹಾಡು ಮನದಲ್ಲೇ ಗುನುಗಿಕೊಂಡೋ, ಇನ್ಯಾವುದೋ ನೆನಪುಗಳ ಸುಳಿಯಲ್ಲಿ ತೇಲಿಕೊಂಡೋ ಗಮ್ಯ ತಲುಪುತ್ತಿದ್ದೆ. ಗಂಡ ಕಾರ್ ಓಡಿಸುತ್ತಿದ್ದರೆ ಕಿಟಕಿಯ ಹೊರಗೇ ನೋಡುತ್ತ ಒಂದು ಮರ-ಗಿಡವೂ, ಯಾವ ನಾಯಿಮರಿಯೂ ನನ್ನ ದೃಷ್ಟಿಯಿಂದ ತಪ್ಪಿಸಿಕೊಳ್ಳಬಾರದೆಂಬಂತೆ ನೋಡುವವಳು ನಾನು. ಆದರೆ ಈಗ ಎಲ್ಲದಕ್ಕೂ ಫುಲ್ ಸ್ಟಾಪ್. ದಾರಿ ಮಧ್ಯದಲ್ಲೆಲ್ಲೋ ಏನಾದರೂ ಸಾಮಾನು ಕೊಳ್ಳಲು ಕಾರ್ ನಿಲ್ಲಿಸಿ ಕೆಳಗಿಳಿದು ‘ಕ್ಲಕ್’ ಎಂದು ಕಾರ್ ಲಾಕ್ ಮಾಡಿ ಕೀ ಹಿಡಿದು ನಡೆಯುವಾಗ ಮೂಡುವ ಅಯಾಚಿತ ಅಹಂಕಾರ ಕೂಡ ನನಗೆ ಬೇಡವಾಗಿತ್ತು. ಆದರೆ…..
ಅಂದಹಾಗೆ ಇವೊತ್ತು (26 ನವೆಂಬರ್) ನನ್ನ ಕಾರಿನ ಮೊದಲ ಹುಟ್ಟುಹಬ್ಬ.
Edited version of this article is published in a Kannada Daily Vishwavani on 19th March 2017.
http://epaper.vishwavani.news/bng/e/bng/19-03-2017/14
ಅದ್ಭುತವಾದ ಜೀವನಾನುಭವಾದ ಗಾಥೆ. ಮಲೆನಾಡಿನ ಹಳ್ಳಿಗಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಅನುಭವ ಹೀಗೆ ಇರುತ್ತದೆ. ಹತ್ತನೆಯ ತರಗತಿವರೆಗೆ ಶೃಂಗೇರಿಯ ಹಳ್ಳಿಯೊಂದರಲ್ಲಿ ಅಭ್ಯಸಿಸುತ್ತಿದ್ದಾಗ, ಹಳ್ಳಿಯಿಂದ ಹೊರ ಹೋದಾಗೆಲ್ಲ ಹೊಸದೊಂದು ಅನುಭವ.
ಆದರೀಗ ಬೆಂಗಳೂರಿಗೆ ಬಂದಾಗಿನಿಂದ two wheeler ಇಲ್ಲದೇ ಎಲ್ಲಿಯೂ ಹೋಗಲು ಆಗುವುದಿಲ್ಲ ಎನ್ನುವ ಹಾಗಾಗಿದೆ. ಇಂಥ ಹಲವಾರು ಅನುಭವ ಕಥನಗಳು ಈ ಬ್ಲಾಗ್ ಅಲ್ಲಿ ಬರಲಿ ಎಂದು ಆಶಿಸುತ್ತ.
ಇಂತಿ
ನಿಮ್ಮ ಪರೋಕ್ಷ ವಿದ್ಯಾರ್ಥಿ
ಕೇಶವ
ಧನ್ಯವಾದ ಕೇಶವ್. ಹೌದು, ಹಳ್ಳಿ-ಚಿಕ್ಕ ಊರುಗಳಲ್ಲಿ ಶಾಲೆ-ಕಾಲೇಜ್ ಗಳು ದೂರ. ಆದರೆ ನಡೆಯುವುದು ಆಗ ವಿಶೇಷ ಎನ್ನಿಸುತ್ತಿರಲಿಲ್ಲ. ಆದರೆ ಈ ಬೆಂಗಳೂರಿನಲ್ಲಿ ತೀರಾ ಹತ್ತಿರದ – ಅಂದರೆ ಕೇವಲ ಒಂದೆರಡು ಕಿ.ಮೀ. ದೂರ ಇರುವ ಶಾಲೆಗೂ ಕೂಡ ಮಕ್ಕಳು ಸ್ಕೂಲ್ ಬಸ್ ನಲ್ಲಿ ಹೋಗುವುದು, ಅಥವಾ ಅವರ ಪೋಷಕರು ಅವರನ್ನು ಡ್ರಾಪ್ ಮಾಡೋದು ನೋಡ್ತಾ ಇದ್ರೆ ಆ ಮಕ್ಕಳ ಬಗ್ಗೆ ಅಯ್ಯೋ ಅನಿಸುತ್ತೆ. ಜೀವನದಲ್ಲಿ ಎಂಥ ಸುಂದರ ಅನುಭವವನ್ನು ಕಳೆದುಕೊಳ್ಳುತ್ತಿದ್ದಾರಲ್ಲ ಅನ್ನಿಸುತ್ತದೆ. ಗೆಳೆಯ/ಗೆಳತಿಯರ ಜೊತೆ ಆಟ-ಹೊಡೆದಾಟ ಎಲ್ಲ ಮಾಡುತ್ತಾ, ಆಚೀಚೆ ಗಮನಿಸುತ್ತಾ, ಗೊತ್ತೇ ಆಗದಂತೆ ಏನೆಲ್ಲಾ ಕಲಿಯುತ್ತಾ ನಡೆಯುವುದು ಎಷ್ಟು ಚೆನ್ನಾಗಿರುತ್ತಿತ್ತು.
ಅಂದಹಾಗೆ, ನನ್ನ ಪರೋಕ್ಷ ವಿದ್ಯಾರ್ಥಿ ಹೇಗೆ ಅಂತ ಕೇಳಬಹುದೇ? ಅಂದರೆ, ಯಾವ ಕಾಲೇಜ್? ಯಾವ ಸೆಮಿಸ್ಟರ್?
– ಚೇತನಾ
ಧನ್ಯವಾದ. Sir MVIT MCA 5ನೆ ಸೆಮ್.
Very beautiful article mam, after reading this I remembered my childhood, even I used to walk 6kms for my school. Thank you mam:)
Thanks Prasanna!!
Ur awesome mam!! And wonderful article.. ur honours are motivating and inspiring. Proud to have you as my teacher!!!!
Thanks Vedha
Thumba chenagide mam
Thank you
Mam paper was easy….
Nice Article
By reading this article mind starts travelling to our childhood memories and concentration increases every moment. When it reaches end of the article mind says “life is beautiful think creatively”.
Thankyu mam… your notes is too helpful for us