ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ಣು ಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ|
ತಿನ್ನುವುದದಾತ್ಮವನೆ – ಮಂಕುತಿಮ್ಮ ||
ಡಿ ವಿ ಜಿ ಯವರ ‘ಮಂಕುತಿಮ್ಮನ ಕಗ್ಗ’ ದ ಈ ಸಾಲುಗಳು ಎಂದೆಂದಿಗೂ ಪ್ರಸ್ತುತ. ಆದರೆ ಇತ್ತೀಚಿಗೆ ನನಗೆ ಇದರ ಕೊನೆಯ ಸಾಲುಗಳು ಸ್ವಲ್ಪ ಹೆಚ್ಚೇ ಕಾಡಲು ಪ್ರಾರಂಭಿಸಿತು.
ಪ್ರಸಿದ್ಧಿಗೆ ಬರಬೇಕೆಂಬ ಹಂಬಲ ಎಲ್ಲರಲ್ಲಿಯೂ ಮೂಲಭೂತವಾಗಿ ಇರುತ್ತದೆಯಾದರೂ ಅದು ಈಗೀಗ ತೀವ್ರವಾಗಿ ಪ್ರಕಟಗೊಳ್ಳುತ್ತಿದೆ. Facebook ಈ ಹಂಬಲಕ್ಕೆ ನೀರೆರೆಯುತ್ತಿದೆ ಎಂದರೆ ತಪ್ಪಾಗಲಾರದು!! ಪ್ರತಿಯೊಬ್ಬರಿಗೂ ತಾನು ನಿಂತಿದ್ದು – ಕೂತಿದ್ದು ಎಲ್ಲವನ್ನೂ ಜಗಜಾಹೀರು ಮಾಡುವ ಹಂಬಲ. ಸೆಲ್ಫಿ ತೆಗೆದು ಲೊಕೇಶನ್ ಹಾಕಿ ಜೊತೆಗಿರುವವರನ್ನು ಟ್ಯಾಗ್ ಮಾಡಿ ಖಾಸಗಿಯಾಗಿರಬೇಕಾದ ವಿಷಯಗಳನ್ನೆಲ್ಲ ಬಟಾಬಯಲು ಮಾಡುವ ತವಕ. ವಿಷಯ ಅದೆಷ್ಟೇ ಬಾಲಿಶವಿರಲಿ, ಮುಖಪುಸ್ತಕದಲ್ಲಿ (Facebook) ಹಾಕಿ ಮುಖಸ್ತುತಿ ಮಾಡಿಸಿಕೊಳ್ಳದಿದ್ದರೆ ಸಮಾಧಾನವಿಲ್ಲ. ಲೈಕುಗಳು ಬಂದಷ್ಟೂ ಖುಷಿ. ಕಮೆಂಟುಗಳಂತೂ ಜಗತ್ತನ್ನೇ ಮರೆಸುವ ಶಕ್ತಿ ಹೊಂದಿವೆ !! ಇನ್ನೊಬ್ಬರ ಸ್ಟೇಟಸ್ / ಫೋಟೋಗಳಿಗೆ ಬಂದ ಲೈಕ್/ಕಮೆಂಟ್ ಗಳನ್ನು ತಮ್ಮದರ ಜೊತೆ ಹೋಲಿಸಿ ನೋಡುವುದು. ಹೆಚ್ಚಿದ್ದರೆ ಹೆಮ್ಮೆ. ಕಡಿಮೆ ಇದ್ದರೆ ಹೆಚ್ಚಿಸಲು ಎಕ್ಸ್ಟ್ರಾ ಗಿಮಿಕ್ !! ಯುವಜನತೆಯಲ್ಲಿ ಇದೊಂದು ಗೀಳೇ ಆಗಿ ರೋಗದ ಸ್ವರೂಪ ಪಡೆಯುತ್ತಿರುವುದನ್ನು ಮನಃಶಾಸ್ತ್ರಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಆದರೆ ಎಚ್ಚೆತ್ತುಕೊಳ್ಳುವವರು ಯಾರು?
ಕೇವಲ IT ಜನರ ಸ್ವತ್ತಾಗಿದ್ದ ಇಂಟರ್ನೆಟ್ ಕ್ರಮೇಣ ಎಲ್ಲ ವಿದ್ಯಾವಂತರ ಕೈಗೆಟುಕಿ ಈಗ ಸಮಾಜದ ಎಲ್ಲ ಸ್ತರದವರಿಗೂ ಲಭ್ಯವಾಗಿದೆ. Facebook – WhatsApp ಗಳು ಇಂಗ್ಲಿಷ್ ಬಾರದವರೂ ಬಳಸುವಷ್ಟು ಸುಲಭವಾಗಿವೆ. ಹೀಗಾಗಿ ವಿವೇಚನೆ ಇದ್ದೋ ಇಲ್ಲದೆಯೋ ಕಂಡಕಂಡದ್ದನ್ನು ಹಂಚುವುದು (Share), ಬರೆದುಕೊಳ್ಳುವುದು ತೀರ ಸಹಜವೆಂಬಂತಾಗಿದೆ.
ಇತ್ತೀಚಿಗೆ ಹುಡುಗಿಯೊಬ್ಬಳು “Got engaged” ಎಂದು relationship ಸ್ಟೇಟಸ್ ಬರೆದು ಹಲವರನ್ನು ಟ್ಯಾಗ್ ಮಾಡಿದುದರ ಫಲವಾಗಿ “Got engaged with Mr. …… and 42 others” ಎಂದು ಕಾಣಿಸಿಕೊಂಡು ಆಭಾಸಕ್ಕೊಳಗಾಗಿತ್ತು. ಮತ್ತು ಇದನ್ನು ಹಲವರು ಜೋಕ್ ರೀತಿಯಲ್ಲಿ ಶೇರ್ ಮಾಡುತ್ತಾ ಹೋದರು. ಪಾಪ, ಆ ಹುಡುಗಿಯ ಸ್ಥಿತಿ ಏನಾಗಿರಬೇಡ?
ಇನ್ನೊಂದು ಘಟನೆ: ಯುವಕನೋರ್ವ ತನ್ನ ದೊಡ್ಡಪ್ಪನ ಹೆಣದ ಮುಂದೆ ನಿಂತು ನಗುತ್ತ ಸೆಲ್ಫಿ ಕ್ಲಿಕ್ಕಿಸಿ ಅದನ್ನೂ ಫೇಸ್ಬುಕ್ ನಲ್ಲಿ ಹಾಕಿದ. ಅದಕ್ಕೆ ಒಂದಿಷ್ಟು ಲೈಕುಗಳು !! ಈ ‘like’ ಎಂಬ ಶಬ್ದದ ಅರ್ಥ ಈ ಸಂದರ್ಭದಲ್ಲಿ ಏನು ಎಂದು ಭಾಷಾ ಪಂಡಿತರು ತಲೆ ಕೆರೆದುಕೊಳ್ಳಲೇಬೇಕು! ದೊಡ್ಡಪ್ಪನ ಸಾವಿನಲ್ಲೂ ನಗುವಂಥ, ಫೋಟೋ ತೆಗೆದು ಜಗಜ್ಜಾಹೀರು ಮಾಡುವಂಥ ಮನಸ್ಥಿತಿಗೆ ಏನನ್ನಬೇಕು?
ಆದರೆ ಈ ಚಾಳಿ ಇಂಟರ್ನೆಟ್ ಜಗತ್ತು ದಾಟಿ ಹೊರಗೆ ಕಾಲಿಟ್ಟಿದ್ದು ಕಳವಳಕಾರಿ ಬೆಳವಣಿಗೆ ಎಂಬುದು ನನ್ನ ಅಭಿಪ್ರಾಯ. ಯಾರೋ ಸಂಬಂಧಿಕರು/ಸ್ನೇಹಿತರು ತೀರಿಕೊಂಡರೆ ಗಲ್ಲಿ-ಗಲ್ಲಿಗಳಲ್ಲಿ ಸತ್ತವರ ಫೋಟೋ ಜೊತೆಗೆ ಶ್ರದ್ಧಾಂಜಲಿ ಸಲ್ಲಿಸುವವರದ್ದೂ ಹೆಸರು ಮತ್ತು ಫೋಟೋ. ಸತ್ತವನ/ಳದ್ದು ಒಂದು ಫೋಟೋ ಆದರೆ ಪೋಸ್ಟರ್ ತುಂಬ ಉಳಿದವರ ಫೋಟೋ. ಇದು ಯಾವ ಪುರುಷಾರ್ಥಕ್ಕೆ? ನನಗಿನ್ನೂ ಅರ್ಥವಾಗಿಲ್ಲ. ಇಂಥವನ ಸ್ನೇಹಿತರು ತಾವು ಎಂದೋ? ಆ ಮೂಲಕ ತಮ್ಮ ಫೋಟೋ ಕೂಡ ಮಿಂಚಲಿ ಎಂದೋ? ಗೊತ್ತಿಲ್ಲ. ಈಗ 10 – 15 ವರ್ಷಗಳ ಹಿಂದೆ ರಸ್ತೆ ಬದಿಗಳಲ್ಲಿ ರಾಜಕಾರಣಿಗಳ ಪೋಸ್ಟರ್ ಗಳು ಕಾಣುತ್ತಿದ್ದವು. ಆದರೆ ಈಗ ಹುಟ್ಟುಹಬ್ಬ, ಮದುವೆ, ವಿವಾಹ ವಾರ್ಷಿಕೋತ್ಸವ, ಸಾವು ಹೀಗೆ ಎಲ್ಲ ಸಂದರ್ಭಗಳಲ್ಲಿ ಜನ ಸಾಮಾನ್ಯರೂ ತಮ್ಮ ಆಸುಪಾಸಿನ ಏರಿಯಾಗಳಲ್ಲಿ ಪೋಸ್ಟರ್ ಹಾಕಿಕೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ರಾಜಕಾರಣಿ ಗಳಿಗಾದರೆ ಒಂದು ಉದ್ದೇಶವಿದೆ – ಚುನಾವಣೆ ಗೆಲ್ಲಬೇಕು. ಜನರಿಗೆ ಕನಿಷ್ಠ ತನ್ನ ಮುಖವಾದರೂ ನೆನಪಿರಬೇಕು. (ಏಕೆಂದರೆ ಕೆಲಸ ಮಾಡಿ ಜನರ ನೆನಪಿನಲ್ಲಿ ಉಳಿಯುವ ರಾಜಕಾರಣಿಗಳ ಸಂಖ್ಯೆ ಬಹಳ ಕಡಿಮೆಯಲ್ಲವೇ?!) ಆದರೆ ಈ ಜನರಿಗೆ ಏನಾಗಿದೆ? ಇಂಥ ಪ್ರಚಾರ ಏಕೆ ಬೇಕು? ಅವರ ಸ್ನೇಹಿತರು/ಸಂಬಂಧಿಕರಿಗೆ ಅವರ ಹುಟ್ಟುಹಬ್ಬ/ವಾರ್ಷಿಕೋತ್ಸವ ಇತ್ಯಾದಿ ಗೊತ್ತೇ ಇರುತ್ತದೆ. ಅಭಿನಂದನೆ ಸಲ್ಲಿಸುತ್ತಾರೆ. ರಸ್ತೆ ಬದಿಯ ಅಪರಿಚಿತರು ಯಾರೂ ಪೋಸ್ಟರ್ ನೋಡಿ ಅವರಿಗೆ ವಿಶ್ ಮಾಡುವುದಿಲ್ಲ. ಅಂದ ಮೇಲೆ ಯಾವ ಘನ ಉದ್ದೇಶದ ಈಡೇರಿಕೆಗೆ ಈ ಬಾಜಾಭಜಂತ್ರಿ? ಜೀವನದಲ್ಲಿ ಯಾವ ಗಮನಾರ್ಹ ಸಾಧನೆಯನ್ನೂ ಮಾಡಿರದ, ಫೋಟೋ ಹಾಕಿಸಿಕೊಳ್ಳುವ ಭಾಗ್ಯ ಒದಗಿ ಬರದ ಜನರು ತಾವೇ ಸೃಷ್ಟಿಸಿಕೊಳ್ಳುವ ಸಂದರ್ಭಗಳಲ್ಲದೇ ಇನ್ನೇನು?
ನಾನು ಗಮನಿಸಿದಂತೆ ಈ ರೀತಿಯ ಮನೋಭಾವ ಇತ್ತೀಚಿನ ಯುವಕರಲ್ಲೇ ಹೆಚ್ಚಿರುವುದು. ತನ್ನ ಸುತ್ತ ನಾಲ್ಕಾರು ಪುಂಡ ಹುಡುಗರನ್ನು ಕಟ್ಟಿಕೊಂಡು ಗಲ್ಲಿಯಲ್ಲಿ ಹೀರೋ ಆಗಿ ಮೆರೆಯುತ್ತ ಇರುವ ಪಡ್ಡೆಗಳದೇ ಫೋಟೋಗಳನ್ನು ನಾನು ಹೆಚ್ಚು ನೋಡಿರುವುದು. ಶಿಕ್ಷಣ – ಕಲೆ – ಸಾಹಿತ್ಯ – ಕ್ರೀಡೆ ಹೀಗೆ ಯಾವುದರಲ್ಲೂ ಅವರು ಏನೂ ಸಾಧಿಸಿರುವುದಿಲ್ಲ. ತನ್ನ ಗಲ್ಲಿಗಷ್ಟೇ ಪರಿಚಯ ಇರುವ ಹುಡುಗ ತನ್ನ ಸ್ನೇಹಿತರಿಂದಲೇ ಫೋಟೋ ಹಾಕಿಸಿಕೊಳ್ಳುವುದು ಅಷ್ಟೇ !! ಕೊಂಚ ದುಡ್ಡು ಜಾಸ್ತಿ ಇದ್ದರೆ ಲೋಕಲ್ ನ್ಯೂಸ್ ಪೇಪರ್ ಗಳಲ್ಲೂ ಫೋಟೋ ಹಾಕಿಸಿಕೊಳ್ಳುವ ಮಟ್ಟಕ್ಕೆ ಇವರು ಮುಂದುವರೆದಿದ್ದಾರೆ. ಇದನ್ನೊಂದು ಚಟ ಅನ್ನುವುದೋ ಮಾನಸಿಕ ಕಾಯಿಲೆ ಎನ್ನುವುದೋ ತಿಳಿಯುತ್ತಿಲ್ಲ.
ಸಾಕಷ್ಟು ಶಿಕ್ಷಿತರಲ್ಲದ immature ಯುವಜನರೇ ಇಂಥ ಭ್ರಮೆಗೊಳಗಾಗಿ ಐಡೆಂಟಿಟಿಯ ಸುಳಿಯಲ್ಲಿ ಸಿಲುಕಿ ಪರಿಪಾಟಲು ಪಡುತ್ತಾರೆ ಎಂಬ ನನ್ನ ಅಭಿಪ್ರಾಯವನ್ನು ಕದಲಿಸುವಂಥ ಸಂದರ್ಭ ಒದಗಿತು. ಅದೊಂದು ಜಿಲ್ಲಾ ಮಟ್ಟದ ಪತ್ರಿಕೆ. ಒಳ್ಳೆಯ ಸರ್ಕ್ಯುಲೇಶನ್ ಕೂಡ ಇದೆ. ಊರಿಗೆ ಹೋದಾಗ ಅದನ್ನು 3 – 4 ದಿನ ಓದುತ್ತಿದ್ದೆ. ಅದರಲ್ಲಿ ಕಂಡ ಕೆಲವು ಜಾಹೀರಾತುಗಳು ನನ್ನನ್ನು ಯೋಚನೆಗೀಡು ಮಾಡಿದವು. ದಿನಾ ಬೆಳಿಗ್ಗೆ ಇಂಥ ಕಾಮಿಡಿ ಸಿಗುವುದಾದರೆ ಬೆಂಗಳೂರಿಗೂ ಈ ಪತ್ರಿಕೆ ತರಿಸಿಕೊಳ್ಳಲೇ ಎನ್ನಿಸಿ ನಗು ಬಂತು.
ಒಂದು ರಾಷ್ಟ್ರೀಯ ಪಕ್ಷದ ಕಾರ್ಯಕರ್ತೆ ಹಾಕಿಸಿಕೊಂಡ ಫೋಟೋ ನೋಡಿ (Pic 1). ಹೊಸವರ್ಷದ ಶುಭಾಶಯ ಹೇಳುವುದು ಆಕೆಯ ಉದ್ದೇಶ. ಆದರೆ ದೇವರ/ಮಹಾಮಹಿಮರ ಫೋಟೋಗಳಲ್ಲಿ ಇರುವಂತೆ ತಲೆಯ ಹಿಂಭಾಗದಲ್ಲಿ ಪ್ರಭಾವಳಿ, ತಲೆಗೊಂದು ಪೇಟಾ, ಮಹಾರಾಣಿಯಂತೆ ಬಟ್ಟೆ – ಆಭರಣ – ಅಲಂಕಾರಗಳು, ಎಡ-ಬಲಗಳಲ್ಲಿ ದೇವರ ಮುಂದೆ ಇರುವಂಥ ದೀಪದ ಕಂಭಗಳು !! ದಂಗಾಗಿ ಹೋದೆ ನಾನು. ಅಚ್ಚ ಕೆಂಪು ಬಣ್ಣದ ದಿರಿಸು ವಿವಾದಾತ್ಮಕ ಸ್ವಾಮಿನಿ “ರಾಧೇಮಾ ” ಳ ನೆನಪು ತರಿಸಿತು 😀 30 – 32 ಕ್ಕಿಂತ ಕಡಿಮೆ ವಯಸ್ಸಿನ ಈಕೆ ಏನನ್ನು ಪ್ರಚುರಪಡಿಸಲು ಹೊರಟಿದ್ದಾಳೆ? ತಾನು ದೇವರೆಂದೇ? ದೇವಾಂಶಸಂಭೂತೆಯೆಂದೇ? ಕೊನೆಗೂ ನನಗೆ ಅರ್ಥವಾಗಲಿಲ್ಲ. (ಅವಳ ಪ್ರೈವಸಿ(?!) ಕಾಪಾಡಲು ಅವಳ ಗುರುತು ಹಾಗೂ ಅವಳ ರಾಜಕೀಯ ಪಕ್ಷ ಎರಡನ್ನೂ ನಾನು ಇಲ್ಲಿ ಮರೆಮಾಚಿದ್ದೇನೆ.)
ಹೋಗಲಿ, ಇದೇನೋ ರಾಜಕೀಯದ ಕೇಸು ಅಂದುಕೊಂಡು ಸುಮ್ಮನಾದರೆ ಮರುದಿನ ಇನ್ನೊಂದು ಜಾಹೀರಾತು – ಶಿಕ್ಷಕನೊಬ್ಬನಿಂದ. ಜಾಹೀರಾತುಗಳಲ್ಲಿರುವ ವಾಕ್ಯಗಳನ್ನು ಗಮನಿಸಿ (Pic 2). ‘ನಾನು’ ಎಂಬ ಅಹಂಕಾರವೇ ಹೇಗೆ ಪ್ರತಿಫಲಿಸುತ್ತಿದೆ ಇಲ್ಲಿ. ದುರಂತವೆಂದರೆ ಪ್ರಶಸ್ತಿ ಪಡೆದ ವಿದ್ಯಾರ್ಥಿಯ ಫೋಟೋ ಇಲ್ಲ. ಬದಲಿಗೆ ಅಭಿನಂದಿಸುವ ಶಿಕ್ಷಕನ ಫೋಟೋ!! ಶಿಕ್ಷಣ ಕ್ಷೇತ್ರ ಎಂಥ ಅಧಃಪತನದತ್ತ ಸಾಗುತ್ತಿದೆಯಲ್ಲ ಎನ್ನಿಸಿತು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ದಾರಿ ತೋರುವುದು ಶಿಕ್ಷಕನ ಕರ್ತವ್ಯ. ನಿಜವಾದ ಶಿಕ್ಷಕ ತನ್ನ ಶಿಷ್ಯ ತನ್ನನ್ನು ಮೀರಿಸಬೇಕು ಎಂದುಕೊಳ್ಳುತ್ತಾನೆಯೇ ವಿನಃ ಶಿಷ್ಯನ ಜೊತೆ ಸ್ಪರ್ಧೆಗೆ ನಿಲ್ಲುವುದಿಲ್ಲ. ಶಿಷ್ಯನ ಸಾಧನೆ ಗುರುವಿಗೆ ಹೆಮ್ಮೆ ತರುವ ವಿಷಯ ನಿಜ. ಹಾಗೆಂದು ತಾನು ಮೆರೆದು ಶಿಷ್ಯನ importance ನ್ನು ಕಡಿಮೆ ಮಾಡುವುದು ಎಷ್ಟು ಸರಿ? ಈ ಜಾಹೀರಾತಿನಲ್ಲಿ ತನ್ನ ಶಿಷ್ಯನನ್ನು ಅಭಿನಂದಿಸುವ ಗುರುವಿನ ಭಾವಕ್ಕಿಂತ ಜಾಸ್ತಿ “ನಾನು – ನನ್ನಿಂದ” ಎಂಬುದೇ ಪ್ರಧಾನವಾಗಿದೆ. ಶಿಷ್ಯನನ್ನು ಅಭಿನಂದಿಸುವುದೇ ಮುಖ್ಯವಾಗಿದ್ದರೆ ಆ ಹುಡುಗನ ಫೋಟೋ ಹಾಕಬಹುದಿತ್ತಲ್ಲ? ರೇಜಿಗೆಯೆನ್ನಿಸಿತು.
ಡಿ ವಿ ಜಿ ಯವರು ನೆನಪಾಗಿದ್ದೇ ಆಗ. ಮನ್ನಣೆಯ ದಾಹವು ಹಸಿವು- ಹಣ – ಪ್ರೇಮ-ಕಾಮ ಈ ಎಲ್ಲ ದಾಹಗಳಿಗಿಂತ ತೀಕ್ಷ್ಣವಾದುದು. ಅದು ಆತ್ಮವನ್ನೇ ಕೊಲ್ಲುತ್ತದೆ ಎಂಬುದು ಅದೆಷ್ಟು ಸತ್ಯವಲ್ಲವೇ? “ಕೀರ್ತಿ ಶನಿ” ಎನ್ನುವುದು ಮನುಷ್ಯನನ್ನು ಒಳಗಿನಿಂದಲೇ ಕಾಡುತ್ತದೆ. ದಹಿಸುತ್ತ ಹೋಗುತ್ತದೆ. ಆತ ಕ್ರಮೇಣ ತನ್ನತನವನ್ನೇ ಕಳೆದುಕೊಳ್ಳುತ್ತಾನೆ. ಪ್ರತೀ ನಡೆ-ನುಡಿಯೂ ಬೇರೆಯವರ ಪ್ರಶಂಸೆಗೊಸ್ಕರವೇ ಎಂಬಂತಾಗುತ್ತದೆ. ಸುತ್ತಲಿನವರಿಂದ ಪ್ರಶಂಸೆ ಸಿಕ್ಕರೆ ತೊಂದರೆಯಿಲ್ಲ. ಆದರೆ ಜನ ಪ್ರಾಮುಖ್ಯತೆ ಕೊಡುವುದನ್ನು ನಿಲ್ಲಿಸಿದಂತೆ ಚಡಪಡಿಕೆ ಶುರುವಾಗುತ್ತದೆ. ಸರಿಯೋ ತಪ್ಪೋ ಒಟ್ಟಿನಲ್ಲಿ ಸುದ್ದಿಯಲ್ಲಿರಬೇಕು. ಈ ತಹತಹ ಮನುಷ್ಯನನ್ನು ಯಾವ ಲೆವಲ್ಲಿಗೂ ಇಳಿಸಬಲ್ಲದು. ಇಂಥವರು ಅಧಿಕಾರದಲ್ಲಿದ್ದರೆ ಕೇಳುವುದೇ ಬೇಡ. ದುಡ್ಡಿದ್ದರಂತೂ ಮಂಗನಿಗೆ ಹೆಂಡ ಕುಡಿಸಿದಂತೆ. ತಮ್ಮ ಸುತ್ತಲೂ ಭಟ್ಟಂಗಿಗಳ ಕೋಟೆ ಕಟ್ಟಿಕೊಳ್ಳುವ ಇವರು ಕೋಟೆಯೊಳಗೆ ಮಾತ್ರ ತಾನು ರಾಜ, ಹೊರಗೆ ತೃಣ ಸಮಾನ ಎಂಬುದನ್ನು ಬುದ್ಧ್ಯಾಪೂರ್ವಕ ಮರೆಯುತ್ತಾರೆ ಮತ್ತು ತಮ್ಮ ಅಧೋಗತಿಗೆ ತಾವೇ ಕಾರಣರಾಗುತ್ತಾರೆ.
“ ‘ನಾನು’ ಹೋದರೆ ಹೋದೇನು” ಎಂದು ಕನಕದಾಸರು ಹೇಳಿದ್ದೂ ಇದೇ ಅರ್ಥದಲ್ಲಿ. ‘ನಾನು’ ಎಂಬ ಭಾವ ತೊಲಗಿದರೆ ಮನುಷ್ಯ ಮುಕ್ತಿಮಾರ್ಗದೆಡೆಗೆ ನಡೆಯುತ್ತಾನೆ. ಇಲ್ಲಿ ಮುಕ್ತಿ ಎಂದರೆ ಸಾಧನೆಯ ಹಾದಿ ಎಂದೂ ತಿಳಿದುಕೊಳ್ಳಬಹುದು. ಡಿ ವಿ ಜಿ ಯವರು ಇದನ್ನೇ ಇನ್ನೊಂದು ಥರದಲ್ಲಿ ಹೇಳಿದ್ದಾರೆ –
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ |
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ||
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, |
ನಿನ್ನುದ್ಧಾರವೆಷ್ಟಾಯ್ತೋ? – ಮಂಕುತಿಮ್ಮ ||
( ವಿ. ಸೂ. : ನಾನೂ ಈ ಲೇಖನವನ್ನು ಫೇಸ್ಬುಕ್ ನಲ್ಲಿ ಹಾಕುತ್ತಿದ್ದೇನೆ !! ಲೈಕ್/ಕಮೆಂಟ್ ಗಳು ಬರಲಿ ಎಂದೋ, ನನ್ನ ಅಭಿಪ್ರಾಯ ಹಂಚಿಕೊಳ್ಳಲೆಂದೋ? 😉 ಓದುಗರ ವಿವೇಚನೆಗೆ ಬಿಟ್ಟಿದ್ದು !!)
ಚೇತನಾ….ಅರ್ಥಪೂರ್ಣವಾಗಿದೆ….ಚೆನ್ನಾಗಿದೆ…
Thanks ಪೂರ್ಣಿಮಕ್ಕ
Very meaningful article ma’m, Thank you..
Thank you.. Nimma parichaya?